Kannada Love Story
ನಯನಂತರಂಗದಲಿ- Kannada love story
..................................................................................................................................................................
ನಯನಂತರಂಗದಲಿ
ಕತ್ತಲು ಕರಗಿಸಿದ ಮೂಡಣ ಬಾನಲ್ಲಿ ಕೆಂಬಣ್ಣ ಕಿರಣಗಳು ಮಿನುಗುತ, ಸ್ವರ್ಣೆಯ ಮೇಲ್ ದಂಡೆಯಲಿ ಕೂತ ರಸಿಕರ ಕಣ್ಣುಗಳ ಮಾತಾಗಿ, ಹಾಡಾಗಿ ನಿತ್ಯದಂತೆ ನಲಿಯತೊಡಗಿದವು.
ವಿಲಾಸನು ನಿನ್ನೆ ರಾತ್ರಿಯ ಕನಸ್ಸುಗಳ ಅವಾಸ್ತವತೆಯ ಗುಂಗಲ್ಲಿ ಎದ್ದು ಹೊರಬಂದು ಸ್ವರ್ಣೆಯ ದಡದ ಅಂಚಲ್ಲಿ ಕೂತು ತಾನೂ ಅಲೆಗೆ ಸೆಲೆಯಾದವನಂತೆ ಏಕಾಂತ ದೃಷ್ಟಿ ಬೀರ ತೊಡಗಿದನು. ಅಲ್ಲಿ ಹಕ್ಕಿಗಳು ಹಾಡುವಾಗ,
ಮೀನೊಂದು ರಪ್ಪನೆ ಜಿಗಿದಾಗ, ತಿಳಿಗಾಳಿಗೆ ಬಿಳಿ ಮಂಜುಗಳು ಮೌನ ಮುರಿದಾಗ ಇವನ ಹೃದಯದ ಭಾವಗಡಲು ಏಕೋ ನಿರ್ಲಿಪ್ತತೆಗೆ ಶರಣಾದಂತಿದೆ...
"ನಾನ್ ಹುಡುಗಿಯಾಗಿ ಹೆಂಗ್ ತಲೆಯೆತ್ತಿ ಮಾತಾಡ್ತಿನಿ, ನಿಂಗೆ ಯಾಕೆ ಆಗಲ್ಲ" ಅನ್ನೋ ಅವಳ ಮಾತು ಕಿವಿಯಲ್ಲಿ ಗುನುಗಿದಾಗ ಅವನ ತುಟಿಯಲಿ ಸಣ್ಣಗೆ ಕಿರುನಗೆ ಮೂಡಿತು. ನನ್ನೊಳಗಿನ ಕೀಳರಿಮೆಯ ಕತ್ತಲಿಗೆ ದೀಪವಿಟ್ಟಂತ ಮಾತದು.
"ಇವನು ಬರೀ ಪಾಪ ಮರೇ", "ಇವನು ಮಾತಾಡೋದೆ ಇಲ್ಲ" "ಅವನು ಸಿಕ್ಕಾಪಟ್ಟೆ ಸೈಲೆಂಟ್" ಇಂತಹ ಮಾತುಗಳ ನಡುವೇನೆ, "ಯಾರಿಗೂ ಪಾಪ ಅಂತ ಅನಿಸ್ಕೊಬೇಡ, ನೀನ್ ಜೋರಾಗ್" ಅನ್ನೊ ಅವಳ ದಿಟ್ಟ ನುಡಿ.
5 6 ವರ್ಷಗಳ ಹಿಂದೆ ಆಫೀಸಲ್ಲಿ ಒಟ್ಟಿಗೆ ಒಡನಾಡಿದ ಕ್ಷಣಗಳ ಗುರುತು ಸ್ಮೃತಿಪಟಲದಲಿ ಹಾಗೆ ಉಳಿದುಕೊಂಡು ಬಿಟ್ಟಿದೆ. ಈ ಒಡನಾಟಕ್ಕೆ ಸ್ನೇಹದ ಹೆಸರು ಕೊಡಲು ಯಾವ ಮುಲಾಜು ಇಲ್ಲ..
ಅವಳು "ಹುಡುಗರು ಅಳುವುದು ನನಗಿಷ್ಟವಿಲ್ಲ" ಅಂದಿದ್ದಳು. ಆ ಮಾತಿಗೆ ನನ್ನ ವಿರೋಧವಿದ್ದರು ವಿರೋಧಿಸಲಾರದೆ ಹೋಗಿದ್ದೆ.. ಆ ಕಡಲು ಅಳುತ್ತೆ, ಮುಗಿಲೂ ಅಳುತ್ತೆ. ಇನ್ನು ಈ ಹುಡುಗುರು ಯಾವ ಲೆಕ್ಕ. ಅವರಿಗೂ ಅಳು ಬರುತ್ತೆ, ಅರ್ಥಪೂರ್ಣವಾಗಿ...
ಅವಳು ಮನದ ಮರೆಯ ನೆನಪಿನಲಿ ಮರೆಯದ ಚುಕ್ಕಿ. ಎಲ್ಲೋ ಒಂದು ಕಡೆ ಸೆಟಲ್ ಅಂತ ಆಗಿ ಚೆನ್ನಾಗಿರುವಳು.. ಯಾವತ್ತು ಖುಷಿಯಾಗಿರಲಿ ಅಂದುಕೊಂಡ.
ಆ ಸೂರ್ಯನು ನೋಡು ಮೆಲ್ಲನೆ ತನ್ನ ವರ್ಣ ಬದಲಾಯಿಸುತ್ತ ಏರುತ್ತಿರುವನು ಮುಗಿಲ ನೆತ್ತಿಯಲಿ ಸ್ವರ್ಣೆಯು ತನ್ನ ಚಲನಗತಿಯನ್ನು ತುಸುವೆ ಏರಿಸತೊಡಗಿದಳು. ಈ ಸಮಯ ಅನ್ನೋದು ಎಷ್ಟು ಬೇಗ ಉರುಳುತ್ತೋ..?
ಕಾಲೇಜು ಅಂತ ಮುಗಿಸಿ ಇಲ್ಲಿಗೆ 8 ವರ್ಷ ಆಯಿತು. ಆ ದಿನಗಳ ಬಗ್ಗೆ ಏನು ಹೇಳಲಿ, ದಪ್ಪ ಕನ್ನಡಕ ಧರಿಸಿಕೊಂಡು, ಬೆನ್ನಿನ ಹಿಂದೆ ಬ್ಯಾಗು ಏರಿಸಿ ಮನೆಯಿಂದ ಮೂರು ಮೈಲಿ ಏಕಾಂಗಿಯಾಗಿ ಕಾಲೇಜಿಗೆ ನಡೆದುಕೊಂಡು ಹೋಗುತಿದ್ದೆ.. ನಾನಾಯಿತು ನನ್ನ ಪಾಡಾಯಿತು ಅನ್ನೋ ರೀತಿ ಇದ್ದೆ. ಕಾಲೇಜು ಸೇರಿದ ಹೊಸತರಲ್ಲಿರಬಹುದು, ಇಂಗ್ಲಿಷ್ ಮಿಡಿಯಮ್ ನಿಂದ ಒಂದಿಷ್ಟು ಹುಡುಗಿಯರು, ಮಧ್ಯಾಹ್ನದ ಫ್ರೀ ಅವರ್ಸಲ್ಲಿ ಅದೇನೊ ಛಾಲೆಂಜಿಂಗ್ ಆಟ ಅಂತ ನನ್ನ ಟಾರ್ಗೆಟ್ ಮಾಡಿ, ಅವರೊಳೊಬ್ಬಳು ಬಂದು ಹಿಂದಿನಿಂದ ನನ್ನ ಶರ್ಟ್ ಎಳೆದುಬಿಟ್ಟಳು. ಇಡೀ ಕ್ಲಾಸಿನ ಕಣ್ಣು ನನ್ನ ಮೇಲೆ ಇತ್ತು.. ನಾನು ಗಪ್ ಚುಪ್ ಅನ್ನದೆ ವಿರೋಧಿಸದೆ ಹಾಗೆ ಕುಳಿತುಬಿಟ್ಟೆ..
ಆ ಕ್ಷಣದಲ್ಲಿ ನನ್ನಲಿ ಮರುಮಾತಾಡುವ ಧೈರ್ಯವಿರಲಿಲ್ಲ.
ಅವಳಿಗೆ ಏನು ಅನಿಸಿತೋ ಸಂಜೆ ಹೊತ್ತಿಗೆ ಬಂದು ಸ್ಸಾರಿ ಕೇಳಿದ್ದಳು..
ಕಾಲೇಜಿನಲ್ಲಿ ಊರಲ್ಲಿ ಸಂಬಂಧಿಕರೂ ಸ್ನೇಹಿತನೂ ಅವರು ಇವರು ಯಾರೆ ಸಿಗಲಿ " ಎಂತ ಮರೆ, ಇಷ್ಟು ಸಪೂರ ಇದ್ದಿಯಾ, ಊಟ ಮಾಡುದಿಲ್ವಾ..? " ಸರಿ ಉಣ್ಕಾ, ನಾನು ನೋಡ್, ಹ್ಯಾಗ್ ಇದ್ದಿನಿ" ಅವರದು ಇಂತದು ಮಾತುಗಳು, ನನ್ನದು ಬರೀ ಮುಗುಳ್ನಗುಗಳು... ಹೀಗೆ ಕಳೆಯಿತಲ್ಲ ಎರಡು ದಶಕಗಳು...
ಕನಸ್ಸುಗಳೋ ತಂಗಾಳಿಗೂ ತಬ್ಬಿ ಯೌವನದ ಬಿಸಿ ರಕುತಕೂ ಹಬ್ಬಿ ಹೊಸ ಅಲೆಗಳನ್ನೆ ಸೃಷ್ಟಿಸುತ್ತೆ. ಅವಳ ನಯನವೊಂದು ಸೋಜಿಗ, ತುಟಿಗಳ ನಗುವೇ ಸಾಹಿತ್ಯ, ಬಳುಕುವ ಸೊಂಟವೇ ನಾಟ್ಯ, ಅವಳೆ ಸತ್ಯ, ಮಿಕ್ಕಿದ್ದು ಮಿಥ್ಯ... ಕ್ಯಾಂಟಿನ್ ಎದುರಲ್ಲಿ ಬಟ್ಟಲಿಡಿಸು ಊಟಕ್ಕೆ ಕ್ಯೂನಲ್ಲಿ ನಿಂತಿರುವಾಗ ಅವಳ ಕಂಡೆ. ಮಗದೊಮ್ಮೆ ಲೈಬ್ರೇರಿ ಟೇಬಲ್ ಮೇಲೆ ಪುಸ್ತಕದ ಕಣ್ಣೇರಿ ಕುಳಿತ ಅವಳ ಗಂಭೀರ ಮೊಗವನು ಕಂಡೆ..
ಗೆಳತಿಯರ ಜೊತೆ ಕಾಲೇಜು ವರಾಂಡದಲಿ ನಗುತ ಹರಟೆಯೊಡೆಯುತಿರುವಾಗ ಅವಳ ದನಿಯ ಸವಿದೆ..
ಹೀಗೆ ಒಂದು ದಿನ ನೀರು ಕುಡಿಯಲು 'ನೀರಿನ ಫಿಲ್ಟರ್' ಹತ್ತಿರ ಬಂದಾಗ ಅವಳ ಗಂಟಲು ನೀರು ಕುಡಿಯುತಿತ್ತು.. ಅವಳಿಂದೆ ಹುಡುಗಿಯರ ಸಾಲು ಇತ್ತು..ಅವಳು ನೀರು ಕುಡಿದು ಲೋಟವನ್ನು ಹಿಂದೆಯಿದ್ದ ಲಲಿತೆಯರಿಗೆ ಕೊಡದೆ ನನ್ನ ಕೈಯಲ್ಲಿಟ್ಟು ಮುಗುಳ್ನಕ್ಕು ಹೋದ ಕ್ಷಣದಲ್ಲೆ ಅವಳಿಗೆ ಮಾರುಹೋದೆ... ಹೀಗೆ ಸಿಕ್ಕಾಗೆಲ್ಲ ಮುಗುಳ್ನಕ್ಕಳು.. ಕಾಲೇಜಿನ ಎರಡುವರೆ ವರ್ಷಗಳು ನನ್ನ ಅವಳ ಮುಗುಳ್ನಗುವಲ್ಲೆ ಕಳೆದುಹೋಯಿತು.. ಹಾಗೊಂದು ದಿನ ಕವನ ಬರೆದು ಭಾವನೆಗಳ ಹಂಚಬೇಕೆಂದು ಬರೆಯಲು ಕುಳಿತೆ.. ಹಾಗೆ ಬರೆಯುತ..
ನೀರು ತುಂಬದೆ ನಿನ್ನ ರೂಪವ ಪಡೆಯಿತು...
ಗೊತ್ತೆ ಇರದ ನಿನ್ನೆಸರು,
ಹಾಗೆ ಬರೆದೆ ಆದರೂ,
ಹೃದಯದಲೆ ನಿನ್ನೊಲವು,
ನಿನಗೂ ಗೊತ್ತೆ ಇಲ್ಲವೋ..
ಸಮಯ ಕಳೆಯಿತು,
ಮುಗುಳ್ನಗೆ ಉಳಿಯಿತು,
ಅದೆಷ್ಟು ತಡವಾಯಿತು,
ಹೀಗೆ ಹೇಳಿಬಿಡುವೆನೆಂದೆ ಬರೆದೆ,
ಒಲವಾಯಿತು ನಿನ್ನ ಮೇಲೆ ಅಂದೆ..!
ನಿನ್ನೊಪ್ಪಿಗೆಯ ನೆಪ ಬೇಕು..
ಕಣ್ಣಲ್ಲೆ ಒಲವಿನ ಸಹಿ ಹಾಕು..
ನನಗಷ್ಟೆ ಸಾಕು...!
- ವಿಲಾಸ್-
ಬರೆದ ಕಾಗದದ ಚೀಟಿಯನ್ನು ಕಿಸೆಯಲ್ಲೆ ಒಂದು ತಿಂಗಳು ಇಟ್ಟಿರಬಹುದು. ಕೊಡಲು ಹೋಗಬೇಕು ಅನ್ನೊವಷ್ಟರಲ್ಲೆ ಅದೇನೋ ಹಿಂಜರಿಕೆ ಮನೆಮಾಡುವುದು.. ಒಂದು ದಿನ ಏನಾದರು ಆಗಲಿ ಎಂದುಕೊಂಡು ಬರೆದ ಚೀಟಿಯನ್ನು ಅವಳಿಗೆ ಕೊಡಲೇಬೇಕೆಂದು ನಿರ್ಧರಿಸಿದೆ.
ಅವಳು ಮಾಮುಲಿಯಾಗಿ ಬರುವ 'ನೀರಿನ ಫಿಲ್ಟರ' ಬಳಿ ಕಾದು ನಿಂತೆ. ಏನೋ ಗೊತ್ತಿಲ್ಲ ಸ್ವಲ್ಪ ಹೊತ್ತಿನಲ್ಲೆ ಅವಳ ಆಗಮನವಾಯಿತು.. ನಗುವಿನ ವಿನಿಮಯವಾಗುವ ಕ್ಷಣದಲ್ಲೆ ರಪ್ಪನೆ ಅವಳ ಕೈಗೆ ಚೀಟಿಯನ್ನಿಟ್ಟು ಹಿಂತಿರುಗಿ ನೋಡದೆ ಹಾಗೆ ಬಂದು ಬಿಟ್ಟೆ.. ಬೆವರಿದ ಎದೆಯಲ್ಲಿ ಇಡೀ ದಿನ ಇದ್ದೆ. ಪಾಠ ಕೇಳಲು ಆಗಿರಲಿಲ್ಲ..
ಒಂದು ವಾರ ಅವಳ ಎದುರಿಗೆ ಬರುವ ಧೈರ್ಯ ಸಾಲಲಿಲ್ಲ. ಅವಳ ಕಣ್ತಪ್ಪಿಸಿ ಓಡಾಡತೊಡಗಿದೆ..
ಹಾಗೂ ಹೀಗೂ ಒಂದು ದಿನ ತಟ್ಟನೆ ಅಂತ ಎದುರಿಗೆ ಸಿಕ್ಕಿ ಬಿಟ್ಟಳು.. ನಾನು ಹಾಗೆ ತಬ್ಬಿಬ್ಬಾಗಿ ಬಿಟ್ಟೆ. ಏನು ಹೇಳಬೇಕೆಂದು ತಿಳಿಯದೆ ಹಾಗೆ ನಿಂತು ಬಿಟ್ಟೆ.. ಅವಳು ನಗುತ, "ಕವನ ಚೆನ್ನಾಗಿತ್ತು,
ನೈಸ್" ಅಂದು ಮುಂದೆ ಸಾಗಿದಳು. 'ಅಷ್ಟೇನಾ, ಮತ್ತೇನು ಹೇಳಲೆ ಇಲ್ಲ... ಅವಳಿಗೆ ನಾನು ಪ್ರೊಪೋಸ್ ಮಾಡಿದ್ದು ಗೊತ್ತೆ ಆಗಲೇ ಇಲ್ವಾ..? ಅಥವಾ ಗೊತ್ತಿದ್ದು ಸುಮ್ಮನೆ ನಟಿಸಿದ್ದ..? ಏನೋ ಗೊಂದಲ ಉಂಟಾಯಿತು.. ಅಲ್ಲಿಗೆ ಮುಗಿಯಿತು, ಸೆಮಿಸ್ಟರ್ ಪರೀಕ್ಷೆಗಳು ಹತ್ತಿರ ಬಂತು. ಓದಲು ರಜೆ ಸಿಕ್ಕಿ ಪರೀಕ್ಷೆಗಳು ಶುರುವಾಗಿ ನನ್ನ ಅವಳ ಬೇಟಿ ಆಗಲೇ ಇಲ್ಲ.. ಅವಳ ನನ್ನ ಮಧ್ಯೆ ನಡೆದಂತಹ ಆ ಘಟನಾವಳಿಗಳನ್ನು ಇಂದಿಗೆ ನೆನೆಸಿಕೊಂಡರೆ ತಮಾಷೆಯಾಗಿ ತೋರುತ್ತೆ...
ನದಿಯ ದಂಡೆಯಲ್ಲೆ ಕೂತವನ ಕಾಲಿಗೆ ನೀರಿನ ತಣ್ಣನೆಯ ಹೊಡೆತ ಬೀಳಲಾರಂಬಿಸಿತು.
ಆಗೊಂದಿಷ್ಟು ಇಂಪು ಕೊಟ್ಟ ತಂಗಾಳಿಗೆ ಬೆಳಗಿನ ಜ್ಯೋತಿ ಅಧ್ಬುತವಾಗಿ ಮೂಡಿತು..
ಇವಳ ಹೆಸರು ಕೂಡ ಜ್ಯೋತಿಯಲ್ವಾ..! ನರ್ಸ್, ನನ್ನ ಭಾವನ ಚಿಕ್ಕಮನ ಮಗಳು.
ಎದುರಲ್ಲಿ ಸಿಕ್ಕಾಗ ಬರೀ ನಗುವಲ್ಲೆ ಮಾತುಕತೆಯಾಗಿತ್ತು..
ಫೇಸ್ ಬುಕಲ್ಲಿ ಫ್ರೆಂಡ್ಶಿಪ್ ರಿಕ್ವೆಸ್ಟ್ ಕಳಿಸಿದ್ದು ಅವಳೆ. ನಾನು ಅಕ್ಸೆಪ್ಟ್ ಮಾಡಿದ್ದೆ.. ಅಲ್ಲಿಂದಲೆ ಚಾಟಿಂಗ್ ಅಂತ ಶುರುವಾಗಿ, ವಾಟ್ಸ್ ಆಪ್ ವರೆಗೂ ಬಂದು, ಒಂದು ದಿನ ಅವಳ ನೈಟ್ ಡ್ಯೂಟಿಯಿರುವಾಗಲೇ ಮೆಸೇಜ್ ಮುಖಾಂತರ ಪ್ರಪೋಸ್ ಮಾಡಿಬಿಟ್ಟೆ..
ಅವಳು ಒಪ್ಪಿಗೆ " ಲವ್ ಯೂ ಟೂ" ಅನ್ನೋ ರೀತಿಯಲ್ಲೆ ಬಂತು...
ಅವಳು ನನ್ನ ಹಾಗೆ ಸಿಕ್ಕಾಪಟ್ಟೆ ಸೈಲೆಂಟ್, ಹಾಗೂ ನನಗಿಂತಲೂ ಜಾಸ್ತಿ ಸಿಂಪಲ್. ಅದೆ ಕಾರಣಕ್ಕೆ ನಾನು ಅವಳನ್ನು ಇಷ್ಟ ಪಟ್ಟಿದ್ದೆ..
" ಹೀಗೆ ಒಂದು ದಿನ ಬೀಚ್ ನಲ್ಲಿ ಸುತ್ತುತಿರುವಾಗ ನಾನು ಕೇಳಿದೆ "ನಾನು ತುಂಬ ಸಪೂರ ಇದ್ದಿನಿ, ನನ್ನ ಒಪ್ಪಲು ಕಾರಣ ಏನು? " ಅವಳು ಕೈ ಚಿವುಟಿ, " ನಿಮ್ಮ ಕವನ ನಂಗೆ ತುಂಬ ಇಷ್ಟ, ಮನತಟ್ಟುವ ಹಾಗೆ ಬರೀತಿರಿ.. " ಅಂದಳು.
ಅದೇ ಪ್ರಶ್ನೆ ಇತ್ತೀಚೆಗಷ್ಟೆ ಅವಳಲಿ ಕೇಳಿದ್ದೆ ಕಾವ್ಯದ ಧಾಟಿಯಲ್ಲಿ, "ನಾನು ಚೆಲುವಾಂಗನಲ್ಲವಲ್ಲ" ಎಂದು, ಅವಳು ಹೇಳಿದಳು "ಇನ್ನೊಬ್ಬರ ಕಣ್ಣಿಂಗಿತದ ಅರಿವಿಲ್ಲೆನಗೆ, ನನ್ನ ನಯನಂತರಂಗದಲಿ ನಿಮಗಿಂತ ಮಿಗಿಲಾರಿಲ್ಲ" ಅಂದುಬಿಟ್ಟಳು.
ನಾನು ಸಣ್ಣಗೆ ಮುಗುಳ್ನಕ್ಕಿದ್ದೆ..
ಹೀಗೆ ಎರಡು ಮೂರು ದಿನಗಳಿಂದ ಏನೋ ಮುನಿಸು ನಮ್ಮಿಬ್ಬರಲಿ, ಮಾತುಕತೆ ಇಲ್ಲ. ಇವತ್ತೊ ನಾಳೆ ಸರಿಹೋಗಬಹುದು ಅಂತ ಅಂದುಕೊಂಡನು. ಸಮಯದ ಜಾರುವಿಕೆಯ ಅರಿವಾಗಿ ಮೈಕೊಡವಿ ಎದ್ದು ನಿಂತನು. ನಿತ್ಯ ಜಂಜಾಟದ ಕಾರ್ಯಗಳು ಅವನನ್ನು ಎದುರುಗೊಳ್ಳುವುದರಲಿತ್ತು..
kannada feelings love story by Ashok Kunder
for more feelings lines subscribe to my youtube Channel 'ashokkunder kannada kavanagalu"
ನಯನಂತರಂಗದಲಿ- Kannada love story
Reviewed by ASHOK KUNDER
on
14:47
Rating:
No comments: